ಕಮಾನು : ಆರೀಯಾ ದಿಕ್ಕಿನಲ್ಲಿ ಎಸೆಗಳುಳ್ಳ ಆಪಿನ ಆಕಾರದ ಇಟ್ಟಿಗೆ, ಕಲ್ಲು ಇಲ್ಲವೆ ಕಾಂಕ್ರೀಟಿನ ದಿಂಡುಗಳ ಜೋಡಣೆ (ಆರ್ಚ್). ಕಮಾನಿನ ಒಳಭಾಗವೂ ಹೊರಭಾಗವೂ ವಕ್ರಾಕಾರವಾಗಿವೆ. ದಿಂಡುಗಳೇ ಇಲ್ಲದ ಪ್ರಬಲಿತ ಕಾಂಕ್ರೀಟಿನ ಮತ್ತು ಉಕ್ಕಿನ ಈ ಆಕಾರದ 
ರಚನೆಗಳನ್ನು ಈಚೆಗೆ ಕಮಾನು ಎಂದೇ ಕರೆಯುತ್ತಾರೆ. ಕಮಾನಿನ ತತ್ತ್ವ (ಎಂದರೆ ಬಾಗಿದ ರಚನಾವಿನ್ಯಾಸದಲ್ಲಿ) ಇಟ್ಟಿಗೆಗಳನ್ನಾಗಲಿ, ಕಲ್ಲುಗಳನ್ನಾಗಲೀ ಒಂದಕ್ಕೊಂದು ಆಸರೆಯಾಗಿರುವಂತೆ ಜೋಡಿಸುವುದು ಪ್ರಾಚೀನ ಐಗುಪ್ತರಿಗೂ ಬ್ಯಾಬಿಲೋನಿಯನ್ನರಿಗೂ 
ಗ್ರೀಕರಿಗೂ ತಿಳಿದಿತ್ತು. ಕ್ರಮವಾದ ಕಮಾನು ಮೊದಲು ನಿರ್ಮಾಣವಾದದ್ದು ಪ್ರ.ಶ.ಪು. 4,000ರಲ್ಲಿ, ಯೂಫ್ರಟಿಸ್ ಟೈಗ್ರಿಸ್ ನದಿ ಕಣಿವೆಯಲ್ಲಿ. ಪ್ರಾಚೀನ ಈಜಿಪ್ಟಿನಲ್ಲಿಯೂ ಭಾರತದಲ್ಲಿಯೂ ಕಮಾನು ತಿಳಿದಿತ್ತು. ಆದರೆ ಅದನ್ನು ಹೆಚ್ಚಾಗಿ ಕಟ್ಟಡಗಳಲ್ಲಿ ಬಳಸಲಿಲ್ಲ. ನಗರಗಳ 
ಮಹಾದ್ವಾರಗಳ ಮೇಲೆ ಸ್ಮಾರಕ ಕಮಾನುಗಳ ರಚನೆ ಮೊದಲು ಆದದ್ದು ಏಷ್ಯದ ಅಸ್ಸೀರಿಯದಲ್ಲಿ. ಆದರೆ ವಾಸ್ತುಶಿಲ್ಪದಲ್ಲಿ ಮೊದಲು ಇದನ್ನು ಬಳಸಿದವರು ಇಟ್ರಸ್ಕನರು. ರೋಮನ್ನರು ಇವರಿಂದ ಈ ಕಲೆಯನ್ನು ಕಲಿತು ಅದನ್ನು ಪರಿಪುರ್ಣತೆಗೆ ತಂದು ದೊಡ್ಡ ಕಟ್ಟಡಗಳಲ್ಲಿ 
ಉಪಯೋಗಿಸಿ ರೋಮನ್ ಚಕ್ರಾಧಿಪತ್ಯದಲ್ಲಿಯೇ ಅಲ್ಲದೆ ನಾಗರಿಕ ಪ್ರಪಂಚದಲ್ಲೆಲ್ಲಾ ಹರಡಿದರು. ಇವರು ತಲೆಗಟ್ಟಡ ಮತ್ತು ಜಂತಿಗಳಿಗೆ ಬದಲಾಗಿ ಕಂಬಗಳ ಮೇಲೆ ಕಮಾನುಗಳನ್ನು ಕಟ್ಟಿದರು. ವಾಸ್ತುಶಿಲ್ಪದಲ್ಲಿ ಮಟ್ಟರೇಖೆಗಳ ಪ್ರಾಧಾನ್ಯ ಕ್ರಮೇಣ ಕಡಿಮೆಯಾಗಿ ಕಂಬದ 

ತಲೆಗಟ್ಟಡ (ಎಂಟಾಬ್ಲಟ್ಯೂರ್) ಕಣ್ಮರೆಯಾಯಿತು. 19ನೆಯ ಶತಮಾನದ ಮಧ್ಯ ಭಾಗದವರೆಗೂ ಕಟ್ಟಡದ ಒಂದು ಮುಖ್ಯಭಾಗವಾಗಿ ಕಮಾನು ಇತ್ತು. ಈಚೆಗೆ ಉಕ್ಕು ಮತ್ತು ಪ್ರಬಲಿತ ಕಾಂಕ್ರೀಟ್ನ ಆವಿಷ್ಕಾರವಾದ ನಂತರ ಕಮಾನಿನ ಆಕಾರವನ್ನು ದೊಡ್ಡ ಸೇತುವೆಗಳ 
ನಿರ್ಮಾಣದಲ್ಲಿ ಬಳಸುತ್ತಿದ್ದಾರೆ.

ಕಮಾನಿನಲ್ಲಿ ಒಳಮುಖವನ್ನು ಒಳಬಾಗು (ಇಂಟ್ರೇಡಾಸ್) ಎಂದೂ ಹೊರಮುಖವನ್ನು ಹೊರಬಾಗು (ಎಕ್ಸ್‌ಟ್ರೇಡಾಸ್) ಎಂದು ಕರೆಯುತ್ತಾರೆ. ಇವುಗಳ ನಡುವೆ ಇರುವ ಆಪಿನ ಆಕಾರದ ಕಲ್ಲುಗಳನ್ನು ಬೆಣೆಕಲ್ಲು ಎಂದು ಮಧ್ಯದ ಕಲ್ಲನ್ನು ನೆತ್ತಿಯ ಕಲ್ಲೆಂದು ಕರೆಯುವುದು 
ವಾಡಿಕೆ. ಚಿಮ್ಮುವ ಕಲ್ಲಿನಿಂದ (ಸ್ಪ್ರಿಂಗೀ) ಕಮಾನು ಸಾಮಾನ್ಯವಾಗಿ ಚಿಮ್ಮುತ್ತದೆ. ಆದರೆ ನಿಜವಾದ ಕಮಾನಿನ ಅಡಿಗೂ ಕಂಬದ ಮೇಲುವರಸೆಗೂ ನಡುವೆ ಒಂದು ವರಸೆ ಲಂಬವಾದ ಕಟ್ಟಡವನ್ನು ಕಟ್ಟಿ ವೃತ್ತಕಂಡಾಕಾರದ ಕಮಾನನ್ನು ಚಿಮ್ಮಿಸುವುದು (ಸ್ಟಿಲ್ಫೆಡ್ ಆರ್ಚ್) 
ಉಂಟು. ಸುರಂಗದ ಹಾಗೆ ನಿರಂತರವಾದ ಕಮಾನುಗಳ ಸಾಲನ್ನು ಚಾವಣಿ (ವಾಲ್ಟ್‌) ಎನ್ನುತ್ತಾರೆ.
ಆಪಿನ ಆಕಾರದ ಕಲ್ಲುಗಳಿಂದ, ಅದರ ರಚನೆಯ ಸ್ವಭಾವದಿಂದಲೇ, ಕಮಾನಿನಲ್ಲಿ ಬುಡದ ಕಲ್ಲಿನ ಮೇಲೆ ಕೆಳಕ್ಕೆ ಎಳೆಯುವ ತೂಕವೇ ಅಲ್ಲದೆ ಮಟ್ಟವಾಗಿ ಹೊರಕ್ಕೆ ನೂಕುವ ಪ್ರವೃತ್ತಿಯೂ ಇರುತ್ತದೆ. ಕಮಾನು ಭದ್ರವಾಗಿರಬೇಕಾದರೆ ಈ ನೂಕನ್ನು ಗುದ್ದುಗಂಬಳಿಂದಲೋ 
ಊರೆಗಳಿಂದಲೋ ಎದುರಿಸಬೇಕು. ಒಂದು ಸೇತುವೆಯ ನಡುವಿನ ಕಂಬದಲ್ಲಿ ಎರಡು ಪಕ್ಕಗಳಲ್ಲಿಯೂ ಒಂದೇ ಅಗಲದ ಕಮಾನುಗಳಿರುವುದರಿಂದ ಒಂದು ಪಕ್ಕದ ಕಮಾನಿನ ಮಟ್ಟವಾದ ನೂಕು ಇನ್ನೊಂದು ಪಕ್ಕದ್ದರ ನೂಕಿಗೆ ಸಮಾನವಾಗಿ ಎದುರು 
ದಿಕ್ಕಿನಲ್ಲಿರುವುದರಿಂದ ಒಂದನ್ನೊಂದು ಸಮತೂಕ ಮಾಡಿ ಕಂಬವನ್ನು ಸುರಕ್ಷಿತವಾಗಿ ಮಾಡುತ್ತದೆ.
ಕಮಾನಿನಲ್ಲಿ ಅನೇಕ ರೂಪಗಳಿವೆ. ಅನೇಕ ನಮೂನೆಯ ಕಟ್ಟಡಗಳಲ್ಲಿ ಇವು ಉಪಯೋಗವಾಗುತ್ತಿವೆ. ಅರ್ಧವೃತ್ತಾಕೃತಿಯ ಕಮಾನಿನಲ್ಲಿ ಮೇಲೆ ಬಿದ್ದ ತೂಕ ಲಂಬವಾಗಿ ಕಂಬಕ್ಕೆ ಇಳಿಯುವುದರಿಂದ ಇದು ಬಲಿಷ್ಠವಾದ ನಮೂನೆ. ಇದನ್ನು ರೋಮನ್ನರು ಕಟ್ಟಡಗಳಲ್ಲಿಯೂ 
ನಗರಕ್ಕೆ ನೀರನ್ನು ತರುವ ಮೇಲುಗಾಲುವೆಗಳಲ್ಲಿಯೂ ರಚಿಸುತ್ತಿದ್ದರು. ಅರ್ಧವೃತ್ತಾಕೃತಿಯ ಮತ್ತು ತಪ್ಪಲೆ ಕಮಾನುಗಳನ್ನು ಮನೆ ಕಟ್ಟುವುದರಲ್ಲಿ ಉಪಯೋಗಿಸುವುದೇ ಹೆಚ್ಚು. ಚೂಪಾದ ಗಾಥಿಕ್ ಕಮಾನು ಯುರೋಪಿನಲ್ಲಿ ಮಧ್ಯಯುಗದಲ್ಲಿ ಇಗರ್ಜಿಗಳನ್ನು ಕಟ್ಟುವಾಗ 
ವಿಕಾಸವಾಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕಟ್ಟಡಗಳಲ್ಲಿ ಈ ಆಕಾರದ ಕಮಾನು ಸಾಲುಗಳನ್ನು ನೋಡಬಹುದು. ಓಗೀ ಆಕಾರದ ಚೂಪಾದ ಕಮಾನುಗಳನ್ನು ಹಿಂದೆ ಮನೆಗಳ ಕಿಟಕಿ, ಬಾಗಿಲುಗಳ ಮೇಲೂ ಬಳಸುತ್ತಿದ್ದರು. ಭಾರತದಲ್ಲಿ ಮೊಗಲರ ಕಾಲದ 

ಭವ್ಯವಾದ ಕೋಟೆಗಳಲ್ಲಿ ಇಂಡೋಸ್ಯಾರೆಸಾನಿಕ್ ಕಮಾನನ್ನು ವಿಶೇಷವಾಗಿ ಉಪಯೋಗಿಸಿದ್ದಾರೆ. ಮೂರು ಕೇಂದ್ರಗಳಿಂದ ಎಳೆದ ವೃತ್ತಖಂಡಗಳನ್ನೆಳೆದು ಅರ್ಧ ಅಂಡಾಕಾರವಾದ (ಸೆಮಿ ಎಲ್ಲಿಪ್ಟಿಕ್) ಕಮಾನುಗಳನ್ನು ಇಟ್ಟಿಗೆ ಗಾರೆಯಿಂದ ಕಟ್ಟಿದ ಸೇತುವೆಗಳಲ್ಲಿ 
ಬಳಸಿದ್ದಾರೆ. 1858ರಲ್ಲಿ ಕಟ್ಟಿದ ಶಿವಮೊಗ್ಗದ ತುಂಗಾನದಿಯ ಸೇತುವೆ ಭದ್ರಾವತಿಯ ಸೇತುವೆಗಳನ್ನು 50 ಕಣ್ಣಿನ ಇಟ್ಟಿಗೆಯ ಈ ನಮೂನೆಗಳಿಂದ ಕಟ್ಟಿದ್ದಾರೆ. ಉತ್ತರ ದೇಶದ ಮೆಕ್ಕಲು ಮಣ್ಣಿನ ಬಂiÀÄಲುಗಳಲ್ಲಿ ಕಲ್ಲೇ ಸಿಕ್ಕುವುದಿಲ್ಲ. ಹರಿದ್ವಾರದಿಂದ ರೂರ್ಕೀಯ 
ಕಡೆಗೆ ಹೋಗುವ ಮೇಲಿನ ಗಂಗಾನಾಲೆಯಲ್ಲಿ 10,500 ಕ್ಯೂಸೆಕ್ಸ್‌ ಎಂದರೆ ನಮ್ಮ ವಿಶ್ವೇಶ್ವರಯ್ಯನಾಲೆಯ ಐದರಷ್ಟು ನೀರು ಹರಿಯುತ್ತದೆ. ಈ ನಾಲೆ 80,000 ಕ್ಯೂಸೆಕ್ಸುಗಳ ಪ್ರವಾಹವನ್ನು ಸಾಗಿಸುವ ಸೋಲಾನಿ ನದಿಯನ್ನು 15 ಮೀ ಕಣ್ಣಿನ 11 ಇಟ್ಟಿಗೆ ಗಾರೆಯ 
ಕಮಾನುಗಳ ಮೇಲುಗಾಲುವೆಯಲ್ಲಿ ದಾಟುತ್ತದೆ. ನದಿಗಳ ಮೇಲೆ ರಸ್ತೆಗಳನ್ನು ರೈಲು ದಾರಿಗಳನ್ನು ಸಾಗಿಸುವ ಸೇತುವೆಗಳಲ್ಲಿ ವೃತ್ತ ಖಂಡಾಕಾರವನ್ನು ಬಳಸಿದ್ದಾರೆ. ಬಿಲ್ಲಿನ ಹುರಿಯ ಆಕಾರವನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ತುಂಗಾನದಿಯ ಮೇಲಿನ 
ಸೇತುವೆಯಲ್ಲಿ ಉಪಯೋಗಿಸಿದ್ದಾರೆ. 243 ಮೀಗಳ ಒಂದು ಕಣ್ಣಿನ ತೂಗು ಸೇತುವೆಯಲ್ಲಿ ಉಕ್ಕಿನ ಹೊರಜಿ ಮಾಲಾಕಾರವಾಗಿ (ಕ್ಯಾಟೆನರಿ) ಇದೆ.

ಚಪ್ಪಡಿಯಂತೆ ಕಮಾನು ಸಹ ಇಂಜಿನಿಯರಿಂಗ್ನಲ್ಲಿ ಸರ್ವತ್ರ ಉಪಯೋಗವಾಗುವ ನಮೂನೆ. ಕಮಾನಿಗೆ ಜೀವಕಳೆ ಇದೆ. ಅದು ಪಕ್ಕದ ದಿಮ್ಮಿಗಳನ್ನು ತಳ್ಳಿ ಜೀವಂತ ಪ್ರಾಣಿಯಂತೆ ಎಚ್ಚರವಾಗಿದ್ದು, ವಿಲಾಸದಿಂದ ಭಾರವನ್ನು ಹೊತ್ತಿರುವಂತೆ ಕಾಣುತ್ತದೆ. ಕಮಾನು ನಿದ್ದೆ 
ಮಾಡುವುದಿಲ್ಲ. ಕಟ್ಟಡದ ಆಕಾರಗಳಲ್ಲೆಲ್ಲ ಕಮಾನು ಅತ್ಯಂತ ಮನೋಹರವಾದದ್ದು.

ಓಗೀ:  ಕಮಾನಿನಲ್ಲಿ ಒಂದು ಬಗೆ. ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಕಾಲಾರ್ಯಾಡೊ ನದಿಯ ಮೇಲಿನ ಆಸ್ಟಿನ್ ಅಣೆ ಒಂದು ಓಗೀ ಆಕಾರದ ಅಣೆ. ಇದರ ಮೇಲುಭಾಗವನ್ನು ಮೇಲಿನಿಂದ ಬೀಳುವ ನೀರಿನ ದಾರಿಯನ್ನು ಅನುಸರಿಸಿ ಕಟ್ಟಿದ್ದಾರೆ. ಆದರೆ 1900ರಲ್ಲಿ 
ಬಂದ ಮಹಾಪ್ರವಾಹದಲ್ಲಿ ಈ ಅಣೆ ತಳಪಾಯದ ಸುಣ್ಣಕಲ್ಲಿನ ಮಟ್ಟವಾದ ಹಾಳೆಹಾಳೆಯಾದ ಪದರಗಳಲ್ಲಿ ಸಾಕಷ್ಟು ಅಂಟಿಕೊಳ್ಳುವ ಗುಣವಿಲ್ಲದೆ ಜಾರಿ ಕೆಳಕ್ಕೆ ಉರುಳಿತು. ಇದರ ತಲೆಯ ಭಾಗವನ್ನು ಅಣೆಯ ಮೇಲಿನಿಂದ ಕೆಳಕ್ಕೆ ಉರುಳುವ ನೀರಿನ ದಾರಿಯನು 
ಅನುಸರಿಸಿ ಕಟ್ಟಿದ್ದರು. ಹಾಗೆಯೇ ತಳದಲ್ಲಿ ನೀರನ್ನು ಹೆಚ್ಚು ಕಡಿಮೆ ಲಂಬವಾದ ದಾರಿಯಿಂದ ಮಟ್ಟವಾದ ದಾರಿಗೆ ತಿರುಗಿಸಿದ್ದರು. ಓಗೀ ಕಮಾನನ್ನು ಹಿಂದೆ ಭಾರತದಲ್ಲಿ ವಿಶೇಷವಾಗಿ ಉಪಯೋಗಿಸುತ್ತಿದ್ದರು. ಆದರೆ ಮೇಲಿನಿಂದ ಉರುಳುವ ನೀರು ಕೆಳಗಡೆ ಮಟ್ಟವಾಗಿ 
ಹೊರಬೀಳುವಾಗ ಮಿತಿಮೀರಿದ ವೇಗದಿಂದ ಉರುಳುವುದರಿಂದ ಹೊಳೆಯ ತಳದಲ್ಲಿಯೂ ಅಂಚುಗಳಲ್ಲಿಯೂ ನೆಲ ಕೊರೆದು ಹೋಗುತ್ತದೆ. ಅದಕ್ಕಾಗಿ ತಗ್ಗಾದ ಅಣೆಕಟ್ಟುಗಳಲ್ಲಿ ಈ ಓಗೀ ಆಕಾರವನ್ನು ಹೆಚ್ಚಾಗಿ ಬಳಸುತ್ತಿಲ್ಲ. 	(ಹೆಚ್.ಸಿ.ಕೆ)

ಕಮಾನು ಛಾವಣಿ : ಕಮಾನು ಕಟ್ಟುವ ವಿಧಾನವೇ ಕಮಾನು ಛಾವಣಿಗೂ ಅನ್ವಯಿಸುತ್ತದೆ. ಇಟ್ಟಿಗೆ, ಕಲ್ಲು ಅಥವಾ ಇನ್ನಾವುದಾದರೂ ಕಟ್ಟಡದ ಸಾಮಾನನ್ನು ಉಪಯೋಗಿಸಿ, ಕಮಾನಿನ ಆಕಾರದಲ್ಲಿ ಕಟ್ಟಿದ ಛಾವಣಿ ಭಾಗಕ್ಕೆ ಕಮಾನು ಛಾವಣಿ ಎನ್ನುತ್ತಾರೆ. ಇಂಥ ಛಾವಣಿಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು. 
1. ಪೀಪಾಯಿ : ಈ ವಿಧವಾದ ಛಾವಣಿ ಉದ್ದಕ್ಕೂ ಒಂದೇ ವಿಧವಾಗಿ ಸುರಂಗದ ಛಾವಣಿಯಂತಿರುತ್ತದೆ. 
2. ಆನ್ನುಲರ್ : ಒಂದೇ ವಿಧವಾಗಿ ತೋರುವ ಈ ಛಾವಣಿಯಲ್ಲಿ ಇದನ್ನು ಹೊತ್ತಿರುವ ಗೋಡೆಗಳು ನಕ್ಷೆಯಲ್ಲಿ ಏಕಬಿಂದು ವೃತ್ತಾಕಾರದಲ್ಲಿರುತ್ತದೆ.
3. ಗ್ರಾಯಿನ್ : ಇವನ್ನು ಕ್ರಾಸ್ವಾಲ್ಟ್‌ ಎಂದು ಕರೆಯುತ್ತಾರೆ. ಎರಡು ಪೀಪಾಯಿ ಆಕಾರದ ಛಾವಣಿಗಳು ಒಂದನ್ನೊಂದು ಲಂಬವಾಗಿ ಸಂಧಿಸಿದರೆ ಈ ವಿಧವಾದ ಛಾವಣಿಯಾಗುತ್ತದೆ. ಹೀಗೆ ಸಂಧಿಸಿದ ಜಾಗದಲ್ಲಿ ಛಾವಣಿಯ ಭಾರ ಬೀಳುತ್ತದೆ. ಸಂಧಿಸುವ ರೇಖೆಗೆ ಗ್ರಾಯಿನ್ 
ಎಂದು ಹೆಸರು	(ನೋಡಿ- ಸೇತುವೆ).  (ಕೆ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ